`ಜವಾಬ್ ದೋ... ಮೋದಿ ಜವಾಬ್ ದೋ...’ : ಕಾಂಗ್ರೆಸ್ ಸವಾಲು

ಕರ್ನಾಟಕದಲ್ಲಿ ಮೈತ್ರಿಕೂಟಕ್ಕೆ 22 ಸ್ಥಾನ : ಎಚ್.ಕೆ.ಪಾಟೀಲ್

ಬೆಂಗಳೂರು : ಕಳೆದ ಲೋಕಸಭಾ ಚುನಾವಣೆಗೂ ಮುನ್ನ ದೇಶದ ಜನರಿಗೆ ನೀಡಿದ್ದ ಭರವಸೆಗಳನ್ನು ಪೂರೈಸುವಲ್ಲಿ ಸಂಪೂರ್ಣ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಆರು ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ನಗರದ ಅರಮನೆ ಮೈದಾನದ ವೈಟ್ ಪೆಟಲ್ಸ್ ಗ್ಲಾಸ್ ಹೌಸ್ನಲ್ಲಿ ಬುಧವಾರ ನಡೆದ ಚುನಾವಣಾ ಪ್ರಚಾರ ಸಿದ್ದತಾ ಕಾರ್ಯಾಗಾರದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಅವರು ಈ ಪ್ರಶ್ನೆಗಳನ್ನು ಹಾಕಿದ್ದಾರೆ.
2014ರ ಲೋಕಸಭಾ ಚುನಾವಣೆಗೂ ಮುನ್ನ ನರೇಂದ್ರ ಮೋದಿರವರು, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಡೆಯುವ ಪ್ರಥಮ ಸಭೆಯಲ್ಲೇ ದೇಶದ ರೈತರ ಕೃಷಿ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಐದು ವರ್ಷಗಳ ಅವಧಿ ಮುಗಿದರೂ ಇದನ್ನು ಈಡೇರಿಸುವಲ್ಲಿ ವಿಫಲವಾಗಿದೇಕೆ ?
ವಿದೇಶಿ ಬ್ಯಾಂಕ್ಗಳಲ್ಲಿರುವ ಕಪ್ಪು ಹಣವನ್ನು ವಾಪಸ್ಸು ತಂದು, ದೇಶದ ಜನರ ಖಾತೆಗೆ 15 ಲಕ್ಷ ರೂ.ಗಳನ್ನು ಜಮೆ ಮಾಡುವುದಾಗಿ ವಚನ ನೀಡಿದ್ದೀರಿ. ಎಷ್ಟು ಪ್ರಮಾಣದ ಕಪ್ಪು ಹಣವನ್ನು ವಾಪಸ್ಸು ತಂದಿದ್ದೀರಿ ಹಾಗೂ ಎಷ್ಟು ಜನರ ಖಾತೆಗೆ ಹಣ ಜಮೆ ಮಾಡಿದ್ದೀರಿ ? ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸುವುದಾಗಿ ನೀಡಿದ್ದ ಭರವಸೆ ಏನಾಯಿತು ? ಅದನ್ನೂ ಇತ್ಯರ್ಥ ಪಡಿಸಲಿಲ್ಲವೇಕೆ ? 200 ಟಿಎಂಸಿ ನೀರು ದೇಶದ ಆಸ್ತಿ ವ್ಯರ್ಥವಾಗುತ್ತಿದೆ ಎಂದು ರೈತರು ಪ್ರತಿಭಟಿಸಿದರೆ ಅದಕ್ಕೆ ರಾಜಕೀಯ ಉತ್ತರ ನೀಡಿ ವಚನ ಭ್ರಷ್ಠರಾಗಿದ್ದೇಕೆ ?
ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಹೇಳಿದ್ದೀರಿ. ಆದರೆ, ಇದ್ದ ಉದ್ಯೋಗದಲ್ಲಿಯೇ 1.7 ಕೋಟಿ ಉದ್ಯೋಗಗಳನ್ನು ಕಡಿತಗೊಳಿಸಿದ್ದೀರಿ. ಇದಕ್ಕೆ ನಿಮ್ಮ ಸರ್ಕಾರ ಕಾರಣವಲ್ಲವೇ ?
`ವ್ಯಾಪಂ’ ಸ್ಕ್ಯಾಂ ಹೊರ ಬೀಳುತ್ತಿದ್ದಂತೆಯೇ ಅದರ ತನಿಖೆಯಲ್ಲಿದ್ದ ಎಲ್ಲಾ ಅಧಿಕಾರಿಗಳು, ಸಾಕ್ಷಿಗಳು, ಅಪಘಾತ, ಆತ್ಮಹತ್ಯೆ ಹಾಘೂ ಇನ್ನಿತರ ಕಾರಣಗಳಡಿ ಇದ್ದ 44 ಜನ ಸಾಕ್ಷಿಗಳ ಹೆಣ ಉರುಳಿತಲ್ಲ ಇದಕ್ಕೆ ಯಾರು ಹೊಣೆ ? ಇವೆಲ್ಲ ಪ್ರಶ್ನೆಗಳಿಗೆ ‘ಜವಾಬ್ ದೋ.. ಮೋದಿ ಜವಾಬ್ ದೋ...’ ಎಂದು ಎಚ್.ಕೆ.ಪಾಟೀಲ್ ಆಗ್ರಹಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವೈಫಲ್ಯಗಳನ್ನು ಹಾಗೂ ಅವರು ಕಳೆದ ಲೋಕಸಭಾ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದನ್ನು ಜನರ ಮುಂದೆ ಇಡಲಾಗುವುದು. ಕೇವಲ ಸುಳ್ಳು ಆಶ್ವಾಸನೆಗಳಿಂದ ಜನರಿಗೆ ವಂಚಿಸುತ್ತಿರುವ ಮೋದಿ ಅವರು, ಚುನಾವಣೆ ಸಂದರ್ಭದಲ್ಲಿ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ ಎಂದು ಪಾಟೀಲ್ ಆಪಾದಿಸಿದರು.
22 ಕ್ಷೇತ್ರಗಳಲ್ಲಿ ಗೆಲುವು
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟವು ಕನಿಷ್ಟ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
31ಕ್ಕೆ ರಾಹುಲ್ ಪ್ರಚಾರ
ಮಾ.31 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿ ಪ್ರಚಾರಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗುವುದು. ಪ್ರಿಯಾಂಕಾ ಗಾಂಧಿ ಅವರು ಪ್ರಚಾರಕ್ಕೆ ಬರುವ ಕುರಿತು ಇನ್ನು ಯಾವುದೇ ನಿರ್ಧಾರವಾಗಿಲ್ಲ. ಎನ್ಡಿಎ ಸರ್ಕಾರದ ವೈಫಲ್ಯಗಳು ಮತ್ತು ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಪ್ರಸಕ್ತ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಜಾರಿಗೊಳಿಸಿದ ಜನಪರ ಯೋಜನೆಗಳನ್ನು ಮತದಾರರ ಮುಂದಿಡಲಾಗುವುದು. ಇದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಮಾತ್ರ ಅವಲಂಬಿಸದೇ, ಮತದಾರರ ಮನೆ ಬಾಗಿಲಿಗೆ ತೆರಳಿ ವಿವರಿಸುವ ಕೆಲಸವನ್ನು ಉಭಯ ಪಕ್ಷಗಳ ಕಾರ್ಯಕರ್ತರು ಮಾಡಲಿದ್ದಾರೆ ಎಂದು ಎಚ್.ಕೆ.ಪಾಟೀಲ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ನಂಜಯ್ಯನಮಠ ಮತ್ತಿತರರು ಹಾಜರಿದ್ದರು.

Author:Feederfox News

Blog Link:

Share on

Facebook Twitter Google+ Linkedin Reddit